ಭಂಡ
	ಒಬ್ಬ ರಾಕ್ಷಸ ರಾಜ. ಇವನ ಪೂರ್ವ ಚರಿತ್ರೆ ಹೀಗಿದೆ: ಮನ್ಮಥ ಶಿವನ ಹಣೆಗಣ್ಣಿಗೆ ಆಹುತಿಯಾದ. ಚಿತ್ರಕರ್ಮನೆಂಬ ಗಣೇಶ್ವರ ಕಾಮದಹನ ಶೇಷ ಬೂದಿಯಿಂದ ಒಂದು ಪುರುಷಾಕೃತಿ ನಿರ್ಮಿಸಿದ. ಧ್ಯಾನದಿಂದ ಎಚ್ಚೆತ್ತ ಈಶ್ವರನ ದೃಷ್ಟಿ ಇದರ ಮೇಲೆ ಬಿದ್ದಾಗ ಇದಕ್ಕೆ ಜೀವ ಬಂದಿತು. ಹೀಗೆ ಜೀವ ತಳೆದ ಈ ತರುಣನನ್ನು ಅಪ್ಪಿ ಮುದ್ದಾಡಿದ ಚಿತ್ರಕರ್ಮ ಈತನಿಗೆ ಶತರುದ್ರೀಯ ಉಪದೇಶಿಸಿ ಸರ್ವಶಕ್ತ ಮಹದೇವನನ್ನು ಹೊಗಳಲು ಆದೇಶಿಸಿದ. ಆ ಮಂತ್ರದಿಂದ ಸ್ತುತನಾದ ಶಂಕರ ತರುಣನನ್ನು ವರ ಕೇಳುವಂತೆ ಹೇಳಿದ. ಆಗ ಆ ತರುಣ ತನ್ನೊಡನೆ ಯುದ್ಧಕ್ಕೆ ಬರುವವನ ಅರ್ಧ ಬಲ ತನಗೆ ಬರಬೇಕು ಮತ್ತು ಯಾವ ಶಸ್ತ್ರಾಸ್ತ್ರಗಳಿಂದಲೂ ತನಗೆ ನೋವಾಗಬಾರದೆಂದು ಕೇಳಿಕೊಂಡ. ತಥಾಸ್ತು ಎಂದ ಈಶ್ವರ ನಿನ್ನ ರಾಜ್ಯಭಾರ 60 ಸಾವಿರ ವರ್ಷ ಅಪ್ರತಿಹತವಾಗಿ ನಡೆಯಲಿ ಎಂದು ಅನುಗ್ರಹಿಸಿ ಅದೃಶ್ಯವಾದ. ಶಿವನ ಕೋಪಾನಲದಿಂದ ಹುಟ್ಟಿದ ಈ ತರುಣ ರೌದ್ರ ಸ್ವಭಾವ ತಳೆದು ಭಂಡನೆಂದು ಪ್ರಸಿದ್ಧನಾದ. ಶುಕ್ರಾಚಾರ್ಯರ ಸೂಚನೆಯಂತೆ ಮಯನಿಂದ ನಿರ್ಮಿತವಾದ ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವಾನುದೇವತೆಗಳನ್ನು ತನ್ನ ಹತೋಟಿಯಲ್ಲಿರಿಸಿಕೊಂಡ. ಈತ ಲೋಕಕಂಟಕನಾದಾಗ, ವಿಷ್ಣು ಮೋಹಿನಿಯ ಮುಖಾಂತರ ಈತನ ಶಕ್ತಿ ಕುಂದುವಂತೆ ಮಾಡಿದ. ಅತ್ತ ನಾರದನ ಉಪದೇಶದಂತೆ ಇಂದ್ರ ಮೊದಲಾದ ದೇವತೆಗಳು ಹಿಮಗಿರಿ ತಪ್ಪಲಿನ ಭಾಗೀರಥಿ ತೀರದಲ್ಲಿ ಮಹಾಯಾಗ ದೀಕ್ಷೆ ಕೈಗೊಂಡು ಪರಾಶಕ್ತಿಯ ಪೂಜೆ ಮಾಡಿದರು. ಸುಪ್ರೀತಳಾದ ಪರಾಶಕ್ತಿ ಯಜ್ಞಕುಂಡದಿಂದ ಉದ್ಭವಿಸಿ ಭಂಡನನ್ನೂ ಆತನ ಪರಿವಾರವನ್ನೂ ಶೋಣಿತ ಪುರವನ್ನೂ ನಾಶಪಡಿಸಿದಳು.
(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ